ನೀಲಗಿರಿ
ಕರ್ನಾಟಕ ರಾಜ್ಯದ ದಕ್ಷಿಣಕ್ಕೆ ತಮಿಳು ನಾಡಿನಲ್ಲಿರುವ ಗಿರುಪಂಕ್ತಿ; ಅದೇ ಹೆಸರಿನ ಜಿಲ್ಲೆ. ಈ ಜಿಲ್ಲೆಯ ಬಹುಭಾಗ ನೀಲಗಿರಿ ಬೆಟ್ಟಗಳ ಪ್ರದೇಶವಾಗಿರುವುದರಿಂದ ಜಿಲ್ಲೆಗೆ ಈ ಹೆಸರು ಬಂದಿದೆ. ನೀಲಗಿರಿ ಬೆಟ್ಟಗಳೂ ಸುಮಾರು 2,500 ಚ.ಕಿಮೀ. ವಿಸ್ತೀರ್ಣವಾದ ಅಡಕವಾದ ಉನ್ನತ ಪ್ರದೇಶ. ಇದರ ಶಿಖರಗಳು ಸುತ್ತಣ ಮೈದಾನದಿಂದ ಥಟ್ಟನೆ 1,800-2,400 ಮೀ. ಎತ್ತರಕ್ಕೆ ಎದ್ದಿದೆ. ನೀಲಗಿರಿ ಜಿಲ್ಲೆ ಕರ್ನಾಟಕ ಮತ್ತು ಕೇರಳ ರಾಜ್ಯಗಳು, ಕೊಯಮತ್ತೂರು ಜಿಲ್ಲೆ ಇವುಗಳ ನಡುವೆ ಇದೆ. ಜಿಲ್ಲೆಯ ವಿಸ್ತೀರ್ಣ 2,549 ಚ.ಕಿಮೀ. ಜನಸಂಖ್ಯೆ 4,94,015 (1971). ನೀಲಗಿರಿಯೆಂಬ ಹೆಸರು ಸುಮಾರು 850 ವರ್ಷಗಳಿಗೂ ಹೆಚ್ಚು ಹಳೆಯದು. ಈ ಗಿರಿಪಂಕ್ತಿಯ ಉನ್ನತ ಶಿಖರಗಳು ತೆಳು ನೀಲಿ ಬಣ್ಣದ ಮಂಜಿನಿಂದ ಮುಚ್ಚಲ್ಪಟ್ಟಿರುವುದನ್ನು ಕಂಡ ಜನರು ಇದನ್ನು ಈ ಹೆಸರಿನಿಂದ ಕರೆದಿರಬಹುದು ಎಂದು ಹೇಳಲಾಗಿದೆ.

	ಇತಿಹಾಸ: 930ರಲ್ಲಿ ನೀಲಗಿರಿ ಜಿಲ್ಲೆಯ ಪ್ರದೇಶ ಗಂಗರಾಜರ ಆಡಳಿತದಲ್ಲಿತ್ತು. ಅನಂತರ 16ನೇ ಶತಮಾನದ ಅಂತ್ಯದ ಹೊತ್ತಿಗೆ ಕದಂಬರ ಕೈವಶವಾಯಿತು. ಸುಮಾರು 12ನೇ ಶತಮಾನದ ಆದಿ ಭಾಗದಲ್ಲಿ ಇದು ಹೊಯ್ಸಳರ ಕೈಸೇರಿತು. ಸುಮಾರು 117ರಲ್ಲಿ ಹೊಯ್ಸಳ ರಾಜನಾದ ವಿಷ್ಣುವರ್ಧನ ನೀಲಗಿರಿ ಪ್ರದೇಶವನ್ನು ಗೆದ್ದ. ಹೊಯ್ಸಳರ ಕಾಲದ ಶಿಲಾಶಾಸನಗಳಲ್ಲಿ ನೀಲಗಿರಿಯನ್ನು ನೀಲಾದ್ರಿ, ನೀಲಾಚಲ ಎಂದು ಕರೆಯಲಾಗಿದೆ. ವಿಷ್ಣುವರ್ಧನ ನೀಲಗಿರಿಯಲ್ಲಿ ಒಂದು ಪಟ್ಟಣವನ್ನು ಸ್ಥಾಪಿಸಿದನೆಂದು 1120ರ ಶಾಸನದಲ್ಲಿ ತಿಳಿಸಲಾಗಿದೆ. ನೀಲಗಿರಿ ಬೆಟ್ಟದ ಮೇಲೆ ಒಂದು ಕೋಟೆಯಿತ್ತೆಂದು ಹೇಳಲಾಗಿದೆ. ನೀಲಗಿರಿ ಪವಿತ್ರವೆಂದೂ ಇಲ್ಲಿಯ ಶಿಖರಗಳ ದರ್ಶನಮಾತ್ರದಿಂದ ಪಾಪ ನಾಶವಾಗುತ್ತದೆಂದೂ ಆ ಪ್ರದೇಶದ ಜನರು ನಂಬಿದ್ದರೆಂದು ಅಬೆ ಡೂಬಾಯನ ಹೇಳಿಕೆಯಿಂದ ತಿಳಿದುಬರುತ್ತದೆ.

	ಹೊಯ್ಸಳರ ಅನಂತರ 14ನೆಯ ಶತಮಾನದಿಂದ 16ನೆಯ ಶತಮಾನದವರೆಗೂ ನೀಲಗಿರಿ ಪ್ರದೇಶ ಡಣಾಯಕರ ವಶದಲ್ಲಿದ್ದು, ಈಗಿನ ಡಣಾಯಕನಕೋಟೆಯಿಂದ ಆಳಲ್ಪಡುತ್ತಿತ್ತು. 16ನೆಯ ಶತಮಾನದ ಆದಿಭಾಗದಿಂದ 1565ರವರೆಗೆ ಇದು ವಿಜಯನಗರ ಅರಸರ ಅಧೀನಕ್ಕೆ ಒಳಪಟ್ಟಿತ್ತು. ತಾಳಿಕೋಟೆ ಯುದ್ಧಾನಂತರ ಬಹಮನಿ ಸುಲ್ತಾನರ ವಶವಾಗಿದ್ದು, 1610ರಲ್ಲಿ ಮೈಸೂರಿನ ರಾಜ ಒಡೆಯರ ಆಳ್ವಿಕೆಗೆ ಸೇರಿತ್ತು. 1799ರಲ್ಲಿ ಇದನ್ನು ಬ್ರಿಟಿಷರು ವಶಪಡಿಸಿಕೊಂಡರು. ಇದು ಮದರಾಸ್ ಪ್ರಾಂತ್ಯದ ಭಾಗವಾಯಿತು. ಈಗ ಈ ಪ್ರದೇಶ ತಮಿಳುನಾಡು ರಾಜ್ಯದ ಒಂದು ಜಿಲ್ಲೆಯಾಗಿದೆ.

	ಭೌತಲಕ್ಷಣ: ನೀಲಗಿರಿಯ ಜಿಲ್ಲೆಯಲ್ಲಿ ನಾಲ್ಕು ಸ್ವಾಭಾವಿಕ ವಿಭಾಗಗಳಿವೆ: 1. ನೀಲಗಿರಿಯ ಉನ್ನತ ಪ್ರದೇಶ, 2. ಇದರ ಬುಡಕ್ಕೆ ಹೊಂದಿಕೊಂಡಿರುವ ದಟ್ಟವಾದ ಕಾಡುಪ್ರದೇಶ, 3. ಪಶ್ಚಿಮದ ಆಕ್ಟರ್ಲೋನಿ ಕಣಿವೆ, 4. ಆಗ್ನೇಯದ ವೈನಾಡು. ನೀಲಗಿರಿ ಉನ್ನತ ಪ್ರದೇಶದ ಸ್ವಾಭಾವಿಕ ಮೇರೆಗಳಾಗಿ ದಕ್ಷಿಣದಲ್ಲಿ ಭವಾನಿ ನದಿಯೂ ಉತ್ತರದಲ್ಲಿ ಭವಾನಿಯ ಉಪನದಿಯಾದ ಮೋಯಾರ್ ನದಿಯೂ ಹರಿಯುತ್ತದೆ. ನೀಲಗಿರಿ ಪ್ರದೇಶ ಸುಮಾರು 2,590 ಕಿ.ಮೀ. ಪ್ರದೇಶವನ್ನು ಆವರಿಸಿಕೊಂಡಿದ್ದು, ಸುತ್ತಲೂ ಅತ್ಯಂತ ಕಡಿದಾದ ಇಳಿಜಾರಿನಿಂದ ಕೂಡಿದೆ. ಪೂರ್ವದ ಇಳಿಜಾರು 21/2ಯಿಂದ 3 ಕಿಮೀ. ಉದ್ದವಾಗಿ ಸುಮಾರು 1,829 ಮೀ. ಆಳವಾಗಿದೆ. ಮೋಯಾರ್ ಕಣಿವೆ ಮೈಸೂರು ಪ್ರಸ್ಥಭೂಮಿಯಿಂದ ಈ ಬೆಟ್ಟಗಳನ್ನು ಬೇರ್ಪಡಿಸುತ್ತದೆ.

	ಉತ್ತರ-ದಕ್ಷಿಣವಾಗಿ ಹಬ್ಬಿರುವ ಗಿರಿಶ್ರೇಣಿಯಿಂದ ನೀಲಗಿರಿ ಉನ್ನತ ಭೂಪ್ರದೇಶ ಸ್ವಾಭಾವಿಕವಾಗಿ ವಿಭಜಿಸಲ್ಪಟ್ಟಿದ್ದು, ವಿಭಿನ್ನವಾದ ಪೂರ್ವ ಮತ್ತು ಪಶ್ಚಿಮ ಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. ಈ ಶ್ರೇಣಿ ವಾಯುಗುಣದ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ನೀಲಗಿರಿಯ ಶಿಖರಗಳಲ್ಲಿ ಅತ್ಯಂತ ಎತ್ತರವಾದ್ದು ಉದಕಮಂಡಲದ ಪೂರ್ವಕ್ಕಿರುವ ದೊಡ್ಡ ಬೆಟ್ಟ (2,660 ಮೀ.). ಇತರ ಶಿಖರಗಳಲ್ಲಿ ಮುಖ್ಯವಾದವು ಶಂಖಾಕೃತಿಯ ಸ್ನೊಡನ್ (2,529 ಮೀ.), ಕ್ಲಬ್ ಬೆಟ್ಟ (2,448 ಮೀ.), ಎಲ್ಕ್ ಬೆಟ್ಟ (2466 ಮೀ.). ಇವೂ ದೊಡ್ಡ ಬೆಟ್ಟವೂ ಉದಕಮಂಡಲ ಕಣಿವೆಯನ್ನು ಸುತ್ತುವರಿದಿದೆ. ಪೂರ್ವಕ್ಕಿರುವ ಕುಲಕಂಭೈ ಬೆಟ್ಟದಿಂದ ಭವಾನಿ ಕಣಿವೆ ಪ್ರದೇಶದ ದೃಶ್ಯ ಭವ್ಯವಾದದ್ದು.

	ನೀಲಗಿರಿ ಬೆಟ್ಟಗಳು ಚಾರ್ನೊಕೈಟ್ ಶಿಲಾ ಸಮೂಹಕ್ಕೆ ಸೇರಿದ್ದು, ಗ್ರಾನೈಟಿಕ್ ನೀಸ್ ಶಿಲೆಗಳಿಂದ ಕೂಡಿವೆ. ಇಲ್ಲಿ ಮೂರು ಸ್ತರಭಂಗಗಳಿವೆ. ನೀಲಗಿರಿ ಬೆಟ್ಟಗಳು ನಗ್ನೀಕರಣಕ್ಕೆ ಪಕ್ಕಾದ ಹಳೆಯ ಪ್ರಸ್ಥಭೂಮಿಯ ಅವಶೇಷಗಳೆಂದು ಹೇಳಲಾಗಿದೆ. ನೀಲಗಿರಿ ಬೆಟ್ಟಗಳಲ್ಲಿ ನೂರಾರು ಸಣ್ಣಪುಟ್ಟ ಝರಿ ಹೊಳೆ ನದಿಗಳು ಹುಟ್ಟುತ್ತವೆ. ಎರಡು ದಿಣ್ಣೆಗಳ ಮಧ್ಯದ ಹಳ್ಳದಲ್ಲಿ ಸಾಮಾನ್ಯವಾಗಿ ಒಂದು ಜಲಧಾರೆ ಇದ್ದೇ ಇರುತ್ತದೆ. ಮುಖ್ಯ ನದಿಗಳು ಮೋಯಾರ್, ಭವಾನಿ ಪೈಕಾರ ಮತ್ತು ಕ್ಯಾಲಿಕಟ್. ಮೋಯಾರ್ ನದಿಗೆ ಸಿಗೂರ್, ಗುಂಟಹಟ್ಟಿ, ಕೋಟಗಿರಿ ಎಂಬವು ಉಪನದಿಗಳು. ಸಿಗೂರ್ ಕಣಿವೆ ಪ್ರದೇಶದ ಕಲ್ಹಟ್ಟಿ ಎಂಬಲ್ಲಿ ಸಿಗೂರ್ ನದಿಗೆ 52 ಮೀ. ಎತ್ತರದ ಜಲಪಾತವಿದೆ. ಭವಾನಿಗೆ ಕೋಟಗಿರಿ, ಕೂನೂರ್, ಕಟೀರಿ, ಕುಲಕಂಭೈ, ಕುಂದ ಮುಂತಾದ ಉಪನಿದಗಳಿವೆ. ನೀಲಗಿರಿಯ ಪಶ್ಚಿಮ ಭಾಗದಲ್ಲಿ ಹುಟ್ಟುವ ಪೈಕಾರ ನಿದಗೆ 55 ಮತ್ತು 61 ಮೀ. ಎತ್ತರದಿಂದ ಧುಮುಕುವ ಎರಡು ಜಲಪಾತಗಳಿವೆ. ಇಲ್ಲಿಯ ನದಿಗಳು ವಿದ್ಯುದುತ್ಪಾದನೆಗೆ ಉಪಯುಕ್ತವಾಗಿವೆ. 1932ರಲ್ಲಿ ಪೈಕಾರ ವಿದ್ಯುದುತ್ಪಾದನ ಕೇಂದ್ರ ಪ್ರಾರಂಭವಾಯಿತು.

	ವಾಯುಗುಣ: ನೀಲಗಿರಿ ಪ್ರದೇಶದ್ದು ಆಹ್ಲಾದಕರವಾದ ಸಮಶೀತೋಷ್ಣ ವಾಯುಗುಣ. ವರ್ಷದ ಮೊದಲ ಮೂರು ತಿಂಗಳು ಮಳೆಯಿಲ್ಲದ, ನಿರಭ್ರವಾದ ಆಕಾಶದಿಂದ ಕೂಡಿದ ಹವೆ ಇರುತ್ತದೆ. ಸರಾಸರಿ ವಾರ್ಷಿಕ ಮಳೆ, 1,524-4,064 ಮಿಮೀ. ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಅಧಿಕ ಮಂಜು ಕವಿದಿರುತ್ತದೆ. ಏಪ್ರಿಲ್ ಮೇ ತಿಂಗಳುಗಳಲ್ಲಿ ಮಳೆ ಪ್ರಾರಂಭವಾಗುತ್ತದೆ.

	ಸಸ್ಯಪ್ರಾಣಿಗಳು: ನೀಲಗಿರಿ ಬೆಟ್ಟಗಳ ಸಸ್ಯಸಂಪತ್ತಿನಲ್ಲಿ ಹೆಚ್ಚು ವೈವಿಧ್ಯವಿದೆ. ಇದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. 1. ಇಳಿಜಾರಿನ ಎಲೆ ಉದುರುವ ಕಾಡುಗಳು: ಹೆಚ್ಚು ಬೆಲೆಯುಳ್ಳ ಸಿಡಾರ್, ಸ್ಯಾಟಿನ್, ಬೀಟೆ, ಮತ್ತಿ, ತೇಗ ಗಂಧ, ಹೊನ್ನೆ, ಬೊಂಬು ಮುಂತಾದವುಗಳಿಂದ ಕೂಡಿದೆ. 2. ನಿತ್ಯಹರಿದ್ವರ್ಣದ ಕಾಡುಗಳು: ಪಶ್ಚಿಮದ 9000-1,200 ಮೀ. ಎತ್ತರದ ಇಳಿಜಾರು ಪ್ರದೇಶದಲ್ಲಿವೆ. 3. ಪ್ರಸ್ಥಭೂಮಿಯ ಎತ್ತರ ಭಾಗದಲ್ಲಿ ಕಂಡುಬರುವ ಸಸ್ಯವರ್ಗ: 1200 ಮೀ.ಗಿಂತ ಎತ್ತರವಾದ ಪ್ರದೇಶದಲ್ಲಿ ವಿರಳವಾಗಿ , ಕಡಿಮೆ ಎತ್ತರವುಳ್ಳ, ವಿಭಿನ್ನ ಸಸ್ಯಗಳಿವೆ. 4. ಪ್ರಸ್ಥಭೂಮಿಯ ಹುಲ್ಲುಗಾವಲು: ವಿಶೇಷವಾಗಿ ಒರಟು ಜಾತಿಯ ಹಲವು ಬಗೆಯ ತುಂಡು ಹುಲ್ಲುಗಳು ಬೆಳೆಯುತ್ತವೆ.

	ಸಮಶೀತೋಷ್ಣ ವಲಯ ಪ್ರದೇಶದಿಂದ ತಂದು ಇಲ್ಲಿ ನೆಟ್ಟ ಸಸ್ಯಗಳ ಪೈಕಿ ಸೇಬು, ಪೀಯರ್, ಪ್ಲಮ್, ಚೆರಿ, ಸ್ಟ್ರಾಬೆರಿ ಮುಂತಾದವು ಮುಖ್ಯವಾದವು. ಪ್ಲಾಂಟೇಷನ್ ಬೆಳೆಗಳು ರಬ್ಬರ್, ಕಾಫಿ, ಚಹ ಮತ್ತು ಸಿಂಕೋನ. ಅಲ್ಲದೆ ಯೂಕಲಿಪ್ಟಸ್, ಅಕೇಶಿಯ, ಸಿಲ್ವರ್ ಓಕ್, ಬಲೂ ಗಮ್, ಕಿಕಿಯು ಹುಲ್ಲು, ಧರ್ಮ ಹದ ಮಾಡಲು ಉಪಯೋಗಿಸುವ ಟ್ಯಾನಿನ್ ದೊರೆಯುವ ವ್ಯಾಟ್‍ಲ್ ಬೆಳೆಯಲಾಗುತ್ತದೆ.

	ಆನೆ, ಹುಲಿ, ಕರಡಿ, ಜಿಂಕೆ, ಕಾಡೆಮ್ಮೆ, ಕಾಡುಹಂದಿ, ಕಾಡುಮೇಕೆ, ಕಾಡುನಾಯಿ, ಮೊಲ ತೋಳ ಮುಂತಾದವು ಇವೆ. ಇತ್ತೀಚೆಗೆ ಅರಣ್ಯಗಳು ನಾಶವಾಗುತ್ತಿರುವುದರಿಂದ ವನ್ಯ ಮೃಗಗಳು ನಶಿಸುತ್ತಿವೆ. ಇವನ್ನು ಬೇಟೆಯಾಡುವುದು ಒಂದು ಹವ್ಯಾಸವಾಗಿತ್ತು. ಈಚೆಗೆ ನಿರ್ಬಂಧ ವಿಧಿಸಲಾಗಿದೆ. ಇಲ್ಲಿ ಅನೇಕ ಜಾತಿಯ ಪಕ್ಷಿಗಳುಂಟು.

	ಖನಿಜಗಳು: ಕಟ್ಟಡಗಳಿಗೆ ಉಪಯೋಗಿಸುವ ಕಲ್ಲು ಮತ್ತು ಲ್ಯಾಟರೈಟ್, ಕೊಯಲಿನ್ ಮತ್ತು ಸ್ವಲ್ಪಮಟ್ಟಿಗೆ ಕಬ್ಬಿಣದ ಅದುರಿನ ನಿಕ್ಷೇಪಗಳಿವೆ.

	ಜನ: ನೀಲಗಿರಿಯ ಆದಿವಾಸಿಗಳಲ್ಲಿ ಬಡಗ, ಕೋಟ, ತೋಡ, ಇರುಳ ಮತ್ತು ಕುರುಂಬರು ಮುಖ್ಯರಾದವರು. ಇಲ್ಲಿ ಪಾರ್ಸಿಗಳು, ಭಾರತೀಯ ಕ್ರೈಸ್ತರು, ಹಿಂದುಗಳು ಮತ್ತು ಮುಸಲ್ಮಾನರು, ಯೂರೋಪಿಯನರು, ಚೆಟ್ಟಿಯಾರ್‍ಗಳು ಇದ್ದಾರೆ. ಈಗ ಇಲ್ಲಿ ತಮಿಳರು, ಕನ್ನಡಗರು ಮತ್ತು ಕೇರಳೀಯರೂ ಇದ್ದಾರೆ.

	ಪಟ್ಟಣಗಳು: ನೀಲಗಿರಿ ಬೆಟ್ಟಗಳ ಪ್ರಮುಖ ಪಟ್ಟಣಗಳೆಂದರೆ ಪ್ರವಾಸಿಗಳ ಸ್ವರ್ಗವೆಂದು ಪ್ರಸಿದ್ಧವಾದ ಗಿರಿಧಾಮಗಳಾದ ಉದಕಮಂಡಲ (ಊಟಿ) ಮತ್ತು ಕೂನೂರು. ಕೂನೂರಿಗೆ ಸಮೀಪದಲ್ಲಿ ವೆಲ್ಲಿಂಗ್‍ಟನ್ ದಂಡುಪ್ರದೇಶವಿದೆ. ಮೂರನೆಯ ಪ್ರಮುಖ ಪಟ್ಟಣ ಗೂಡಲೂರು. ಉತ್ತರದಲ್ಲಿ ಸಿಗೂರ್ ಘಾಟ್ ಮೂಲಕ ಮೈಸೂರಿನಿಂದಲೂ ಪಶ್ಚಿಮದಲ್ಲಿ ಗೂಡಲೂರ್ ಘಾಟ್ ಮೂಲಕ ಕೇರಳದ ವೈನಾಡಿನಿಂದಲೂ ಆಗ್ನೇಯದಲ್ಲಿ ಕೋಟಗಿರಿ ಘಾಟ್ ಮೂಲಕ ಮಟ್ಟು ಪಾಳ್ಯಂನಿಂದಲೂ ಸಂಪರ್ಕ ಮಾರ್ಗಗಳಿವೆ. ಉದಕಮಂಡಲಕ್ಕೆ ಮೆಟ್ಟುಪಾಳ್ಯಂನಿಂದ ಕೂನೂರು ಮೂಲಕ ರೈಲುಮಾರ್ಗವಿದೆ. ಉದಕಮಂಡಲ ಹಿಂದೆ ಮದರಾಸ್ ಪ್ರಾಂತ್ಯದ ಬೇಸಗೆ ರಾಜಧಾನಿಯಾಗಿತ್ತು. ಈಗ ಇದು ಒಂದು ಪ್ರವಾಸಿ ಕೇಂದ್ರ. ಇಲ್ಲಿ ಶಾಲಾ ಕಾಲೇಜುಗಳಿವೆ. ಇದರ ಜನಸಂಖ್ಯೆ 63,003 (1971). ಇಲ್ಲಿಯ ಸುಪ್ರಸಿದ್ಧ ಸರ್ಕಾರಿ ವನಸ್ಪತಿ ಉದ್ಯಾನ 1845ರಲ್ಲಿ ಪ್ರಾರಂಭವಾಯಿತು. ಕೂನೂರಿನ ಜನಸಂಖ್ಯೆ 37,663 (1971).

	ಆರ್ಥಿಕತೆ: ನೀಲಗಿರಿಯ ಪ್ರಮುಖ ಉದ್ಯಮ ತೋಟಗಾರಿಕೆ. ಇಲ್ಲಿ ಕಾಫಿ, ಚಹ ತೋಟಗಳಿವೆ. ಬೆಟ್ಟದ ಇಳಿಜಾರನ್ನು ಕಡಿದು ಮೆಟ್ಟಿಲು ಮೆಟ್ಟಿಲಾಗಿ ಮಾಡಿದ ಪಾತಿಗಳಲ್ಲಿ ಆಲೂಗೆಡ್ಡೆಯನ್ನು ಬೆಳೆಯುತ್ತಾರೆ. ಇದರಿಂದ ಅಧಿಕ ಭೂಸವೆತವಾಗಿದೆ.

	ಈ ಪ್ರದೇಶದ ಎಲ್ಲ ಚಟುವಟಿಕೆಗಳೂ ಉದಕಮಂಡಲದ ಸುತ್ತಮುತ್ತಲಿನ ಪರಿಸರದ ಪರಿಮಿತಿಯಲ್ಲಿದೆ. ಸೋಡಾ ನೀರಿನ ತಯಾರಿಕೆ, ಚಲನಚಿತ್ರ ಫಲ್ಮ್ ಉತ್ಪಾದನೆ ಕಾರ್ಖಾನೆ, ಚಹ ಕೈಗಾರಿಕೆ, ನೀಲಗಿರಿ ತೈಲದ ಉತ್ಪಾದನೆ, ವೆಲ್ಲಿಂಗಟ್‍ನ್ನಿನ ಸರ್ಕಾರಿ ಕೊರ್ಡೈಟ್ ಕಾರ್ಖಾನೆ, ಪೈಕಾರ ವಿದ್ಯುತ್ ಕೇಂದ್ರ, ಹೈನುಗಾರಿಕೆ -ಇವು ಇಲ್ಲಿಯ ಕೆಲವು ಪ್ರಮುಖ ಉದ್ಯಮಗಳು.
(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ